ಫಿಲಿಪ್

ಈ ಹೆಸರಿನ ಅನೇಕ ರಾಜರು ಜರ್ಮನಿ, ಫ್ರಾನ್ಸ್, ಮ್ಯಾಸಿಡೋನಿಯ, ಸ್ಟೇನ್ ಮುಂತಾದ ರಾಜ್ಯಗಳಲ್ಲಿ ಆಳಿದ್ದಾರೆ. ಅವರಲ್ಲಿ ಕೆಲವರನ್ನು ಇಲ್ಲಿ ಕೊಟ್ಟಿದೆ. 
ಜರ್ಮನಿಯ ದೊರೆಗಳು

	ಫಿಲಿಪ್: 1177-1208. ರೋಮನ್ ಸಾಮ್ರಾಟ ಒಂದನೆಯ ಫ್ರೆಡರಿಕ್ ಬಾರ್ಬರೋಸನ ಕಿರಿಯ ಮಗ. ಸ್ವಬಿಯಾದ ಡ್ಯೂಕ್. ಇವನು ಮೊದಲಿಗೆ ಆಕೆನ್ ಮತ್ತು ವಟ್ರ್ಸಬರ್ಗ್‍ನ ಚರ್ಚುಗಳಲ್ಲಿ ಪಾದ್ರಿಯಾಗಿ ಅನಂತರ ಬಿಷಪ್ ಆಗಿ ಸೇವೆ ಸಲ್ಲಿಸಿದ. ಇವನ ಸಹೋದರ ಫ್ರೆಡರಿಕ್ ಮರಣ ಹೊಂದಿದಾಗ (1191) ಧಾರ್ಮಿಕ ಸ್ಥಾನವನ್ನು ತ್ಯಜಿಸಿದ. ಇವನ ಸಹೋದರ ಸಾಮ್ರಾಟ್ 6ನೆಯ ಹೆನ್ರಿ ಇವನನ್ನು 1195ರಲ್ಲಿ ಟಸ್ಕನಿಗೂ 1196ರಲ್ಲಿ ಸ್ವಬಿಯಾಕ್ಕೂ ಡ್ಯೂಕ್ ಆಗಿ ನೇಮಿಸಿದ. 6ನೆಯ ಹೆನ್ರಿ 1197ರಲ್ಲಿ ನಿಧನನಾದಾಗ ಅವನ ಮಗ 2ನೆಯ ಫ್ರೆಡರಿಕ್ ಅಪ್ರಾಪ್ತ ವಯಸ್ಕನಾಗಿದ್ದುದರಿಂದ ಫಿಲಿಪನನ್ನೇ ರಾಜನೆಂದು ಚುನಾಯಿಸಿದರು (1198). ಆದರೆ ಭಿನ್ನಮತೀಯರ ಗುಂಪೊಂದು ಬನ್ರ್ಸ್‍ವಿಕ್‍ನ ಒಟೊನನ್ನು ರಾಜನೆಂದು ಚುನಾಯಿಸಿತು. ಪರಮಾಧಿಕಾರಕ್ಕಾಗಿ ಇವರಿಬ್ಬರ ನಡುವೆ 1207ರ ತನಕವೂ ಹೋರಾಟ ನಡೆಯಿತು. 1208ರಲ್ಲಿ ಪೋಪನು ಫಿಲಿಪನನ್ನು ರಾಜನೆಂದು ಮನ್ನಿಸಿದ್ದಲ್ಲದೆ, ಸಾಮ್ರಾಟನನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದ. ಆದರೆ ವಿಟೆಲ್ಸ್‍ಬ್ಯಾಕ್ ಒಟೊ ಎಂಬುವನ ಸಂಚಿಗೆ ಈಡಾಗಿ ಫಿಲಿಪ್ 1208ರಲ್ಲಿ ಕೊಲೆಯಾದ. ಫಿಲಿಪನ ಸಮಕಾಲೀನರು ಇವನನ್ನು ಧೈರ್ಯವಂತ ಸಾತ್ವಿಕ ಜನಾನುರಾಗಿ ಎಂದು ಕೊಂಡಾಡಿದ್ದಾರೆ.

	ಫಿಲಿಪ್ ದಿ ಮ್ಯಾಗ್ನಾನಿಮಸ್: 1504-67. ಯೂರೋಪಿನ ರಾಜಕೀಯ ರಂಗದಲ್ಲಿ ಪ್ರಾಟೆಸ್ಟೆಂಟ್ ಪಂಥದ ಏಳಿಗೆಗೆ ಭದ್ರಬುನಾದಿ ಹಾಕಿದ ಜರ್ಮನಿಯ ಪ್ರಾಟೆಸ್ಟೆಂಟ್ ದೊರೆ. ಕ್ಯಾಥೊಲಿಕ್ ಚಕ್ರವರ್ತಿಯ ವಿರುದ್ಧ ಸಂಸ್ಥಾನಗಳ ಸ್ವಾಯತ್ತತೆಯನ್ನು ಎತ್ತಿಹಿಡಿದವರಲ್ಲಿ ಅಗ್ರಗಣ್ಯ. 1504 ನವಂಬರ್ 13ರಂದು ಮಾರ್‍ಬರ್ಗ್‍ನಲ್ಲಿ ಜನಿಸಿದ. ಎರಡನೆಯ ವಿಲಿಯಮ್‍ನ ಮಗ, ತಾಯಿ ಮೆಕ್ಲಿನ್ ಬರ್ಗ್‍ನ ಡಚಸ್ ಅನ್ನಾ. ಫಿಲಿಪ್ ಐದು ವರ್ಷದವನಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆದ. 1518ರಲ್ಲಿ ರಾಜನಾದ. ಕ್ರಮೇಣ ಮಾರ್ಟಿನ್ ಲೂಥರ್‍ನ ತತ್ತ್ವಗಳಿಂದ ಆಕರ್ಷಿತನಾಗಿ ಆ ಪಂಥದ ಅನುಯಾಯಿಯಾದ. ತಾಯಿಯಿಂದ ದೂರವಾದ ಫಿಲಿಪ್ ತನ್ನ ಹಿರಿಯ ಸಹೋದರಿ-ಸಾಕ್ಷನಿಯ್ನ ಡಚಸ್ ಆದ ಎಲಿಜಬೆತ್‍ಳೊಡನೆ ಆತ್ಮೀಯವಾಗಿದ್ದ.

	ಸ್ವಾವಲಂಬಿಯಾಗಿದ್ದ ಫಿಲಿಪ್ ರಾಜ್ಯಾಡಳಿತವನ್ನು ಪುನರ್‍ಸಂಘಟಿಸಲು ಉದ್ಯುಕ್ತನಾದ. 1542ರಲ್ಲಿ ಲೂಥರನ ತತ್ತ್ವವನ್ನು ಸ್ವೀಕರಿಸಿ ಪ್ರಾಟೆಸ್ಟೆಂಟ್ ಮತಕ್ಕೆ ಸೇರಿದ. 1525ರ ತನಕ ನೆರೆಹೊರೆಯ ತಂಟೆಕೋರ ಸಂಸ್ಥಾನಿಕರನ್ನು ಹತ್ತಿಕ್ಕಿ (ಆಂತರಿಕ ಭದ್ರತೆ ಸ್ಥಾಪಿಸುವ) ಕಾರ್ಯಗಳಲ್ಲಿ ಮಗ್ನನಾಗಿದ್ದ. ಇವನು ಧಾರ್ಮಿಕ ಸ್ವಾತಂತ್ರ್ಯವನ್ನು ಸ್ಥಾಪಿಸಲು ಕ್ಯಾಥೊಲಿಕ್ ಚಕ್ರವರ್ತಿಯನ್ನು ಎದುರಿಸುವ ಮಹಾ ಸಾಹಸಕ್ಕೆ ಕೈಹಾಕಿ ಪರಸ್ಪರ ವೈರ ಮತ್ತು ದ್ವೇಷಾಸೂಯೆಗಳಿಂದ ಕೂಡಿದ್ದ ಪ್ರಾಟೆಸ್ಟೆಂಟ್ ರಾಜರುಗಳನ್ನು ಸಂಘಟಿಸಲು ಯತ್ನಿಸಿದ. ವಿರೋಧಿಗಳೊಂದಿಗೆ ರಾಜಿಮಾಡಿಕೊಂಡ, ತನ್ನ ಸಂಘಟನಾ ಸೂತ್ರವನ್ನು ರಾಜಕೀಯ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸದೆ ಧಾರ್ಮಿಕ ರಂಗಕ್ಕೂ ವಿಸ್ತರಿಸಿದ. ಲೂಥರ್ ಪಂಥದೊಂದಿಗೆ ಜ್ವಿಂಗ್ಲಿಯನ್ ಮತ್ತಿತರ ಪಂಥೀಯರನ್ನು ಒಟ್ಟುಗೂಡಿಸಲು ಪ್ರಯತ್ನಿಸಿದ. ಪ್ರಾಟೆಸ್ಟೆಂಟ್ ಧರ್ಮಪ್ರಧಾನವಾದ ರಾಜ್ಯ ಚರ್ಚ್‍ಗಳು ಮತ್ತು ಹೊಸ ಚರ್ಚ್ ಧರ್ಮಾಧಿಕಾರಿ ವ್ಯವಸ್ಥೆಗಳು ಹೆಸ್ಸೆ ಮತ್ತು ನೆರೆಯ ಸಂಸ್ಥಾನಗಳಲ್ಲಿ ಅಸ್ತಿತ್ವಕ್ಕೆ ಬರುವಲ್ಲಿ ಇವನ ಪಾತ್ರ ಪ್ರಮುಖವಾಗಿತ್ತು. ಸಮಕಾಲೀನ ಜೀವನ ಸ್ಥಿತಿಗಳ ಬಗ್ಗೆ ಹೊಸ ಚಿಂತನೆಗೆ ಮುಕ್ತ ವಾತಾವರಣ ಕಲ್ಪಿಸಲು 1527ರಲ್ಲಿ ಮಾರ್‍ಬರ್ಗ್‍ನಲ್ಲಿ ಪ್ರಾಟೆಸ್ಟೆಂಟ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ. ವೈದ್ಯಕೀಯ ಇತಿಹಾಸದಲ್ಲೇ ಮೊದಲನೆಯದೆನ್ನಲಾದ ಮನೋರೋಗ ಚಿಕಿತ್ಸಾಲಯಗಳನ್ನು ಸ್ಥಾಪಿಸಿದ.

	ಫಿಲಿಪನ ದೃಢ ನಿರ್ಧಾರ, ನಿರ್ಭೀತ ಸ್ವಭಾವ ಹಾಗೂ ಅಸಾಮಾನ್ಯ ಕ್ರಿಯಾಶೀಲತೆಗಳು ಇವನನ್ನು ಪ್ರಾಟೆಸ್ಟೆಂಟ್ ರಾಜಕೀಯ ಮುಂದಾಳಾಗಿ ಮಾಡಿದವು. ಯೂರೋಪಿನಲ್ಲಿ ಫಿಲಿಪ್ ಮ್ಯಾಗ್ನಾನಿಮಸ್ ಎಂಬ ಬಿರುದಿಗೆ ಪಾತ್ರನಾದ. 1531ರಲ್ಲಿ ಇವನು ಆರುಜನ ರಾಜರನ್ನು ಮತ್ತು ಹತ್ತು ಪಟ್ಟಣಗಳನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾದ. ಈ ಮೈತ್ರಿಕೂಟದ ಪರಿಣಾಮವಾಗಿ ದಕ್ಷಿಣ ಜರ್ಮನಿಯಲ್ಲಿ ಆಸ್ಟ್ರಿಯನ್ ಪ್ರಾಬಲ್ಯವನ್ನು ದುರ್ಬಲಗೊಳಿಸುವಲ್ಲಿ ಸಫಲನಾದ. ಆದರೆ ಇವನ ಎರಡನೆಯ ವಿವಾಹ ಪ್ರಸಂಗ ಇವನ ಹೋರಾಟಕ್ಕೆ ಮುಳುವಾಯಿತು. ಇವನು ಅನಿವಾರ್ಯವಾಗಿ ಚಕ್ರವರ್ತಿಯೊಂದಿಗೆ ರಾಜಿ ಮನೋಭಾವ ತೋರಿಸಿದ. ಈ ವೇಳೆಗೆ ಪ್ರಾಟೆಸ್ಟಂಟ್ ಲೀಗ್‍ನಲ್ಲಿ ಅನೈಕ್ಯಮತವೂ ಉಂಟಾಯಿತು. ಈ ಸಂದರ್ಭವನ್ನು ಬಳಸಿಕೊಂಡು ಐದನೆಯ ಚಾಲ್ರ್ಸ್ ಪ್ರಾಟೆಸ್ಟೆಂಟ್ ರಾಜರುಗಳನ್ನು ಹತ್ತಿಕ್ಕಲು 1546ರಲ್ಲಿ ದಂಡಯಾತ್ರೆ ಕೈಗೊಂಡ. ಹಾಗಾಗಿ 1547ರಲ್ಲಿ ಈತ ಚಕ್ರವರ್ತಿಯ ಬಂದಿಯಾದ. ಆದರೆ ಇವನ ಅಳಿಯ ಮತ್ತು ಹಿರಿಯ ಮಗನ ಪ್ರಯತ್ನದಿಂದಾಗಿ 1552ರಲ್ಲಿ ಬಿಡುಗಡೆಯಾದ. ಧೃತಿಗೆಡದೆ ಪ್ರಾಟೆಸ್ಟೆಂಟರ ಐಕ್ಯಕ್ಕಾಗಿ ಮತ್ತು ಯೂರೊಪಿನ ಕ್ಯಾಥೋಲಿಕ್ ರಾಷ್ಟ್ರಗಳಲ್ಲಿದ್ದ ಸಹಮತೀಯರ ಹಿತರಕ್ಷಣೆಗಾಗಿ ಅವಿರತ ಪ್ರಯತ್ನ ನಡೆಸಿದ. 1555ರ ಆಗ್ಸ್‍ಬರ್ಗ್ ಶಾಂತಿ ಒಪ್ಪಂದದ ಮೂಲಕ ಪ್ರಾಟೆಸ್ಟೆಂಟರು ಸಾಮ್ರಾಜ್ಯದೊಳಗೆ ಕ್ಯಾಥೋಲಿಕರೊಂದಿಗೆ ಸಮಾನ ಸ್ಥಾನಮಾನ ಪಡೆಯುವಂತೆ ಮಾಡಿದ. ಫಿಲಿಪ್ 1567 ಮಾರ್ಚ್ 31ರಂದು ನಿಧನನಾದ. ಪ್ರಾಟೆಸ್ಟೆಂಟ್ ಪಂಥದ ಇತಿಹಾಸದಲ್ಲಿ ಇವನ ಹೆಸರು ಅಜರಾಮರವಾಗಿದೆ.

ಫ್ರಾನ್ಸಿನ ದೊರೆಗಳು

	ಫಿಲಿಪ್ I: 1052-1108. ಒಂದನೆಯ ಹೆನ್ರಿಯ ಮಗ. 1059ರಲ್ಲಿ ರೈಮ್ಸ್‍ನಲ್ಲಿ ಈತನ ಪಟ್ಟಾಭಿಷೇಕವಾಯಿತು. 1060ರಲ್ಲಿ ತಂದೆ ನಿಧನನಾದಾಗ ರಾಜನಾದರೂ ಅಪ್ರಾಪ್ತ ವಯಸ್ಕನಾಗಿದ್ದುದರಿಂದ 1066ರ ತನಕ ಫ್ಲಾಂಡರ್ಸನ್ ಕೌಂಟ್ 5ನೆಯ ಬಾಲ್ಡ್‍ವಿನ್ ರಾಜಪ್ರತಿನಿಧಿಯಾಗಿ ಆಡಳಿತ ನೋಡಿಕೊಳ್ಳುತ್ತಿದ್ದ. ಅಂಜುವಿನ ಉತ್ತರಾಧಿಕಾರಕ್ಕಾಗಿ ನಾಲ್ಕನೆಯ ಫಲ್ಕ್ ಮತ್ತು ಅವನ ಸಹೋದರ ಜಿಯಾಫ್ರೆ ನಡುವೆ ನಡೆದ ಹೋರಾಟದಲ್ಲಿ ಈತ ತಟಸ್ಥ ನೀತಿ ಅನುಸರಿಸಿದ್ದಕ್ಕಾಗಿ 1068ರಲ್ಲಿ ಫಲ್ಕನಿಂದ ಗಟಿನೈಸ್ ಕೌಂಟಿಯನ್ನು ಪಡೆದ. ಈತ ಅಧಿಕಾರಕ್ಕೆ ಬಂದಾಗ ಇದ್ದ ಆರ್ಥಿಕ ದುಸ್ಥಿತಿಯನ್ನು ಸರಿದೂಗಿಸಲು ಧರ್ಮಾಧಿಕಾರದ ಸ್ಥಾನಗಳನ್ನು ಮಾರುವುದನ್ನು ರೂಢಿಗೆ ತಂದ. ಸಮಯಸಾಧಕನಾಗಿದ್ದ ಈತ ತನ್ನ ಸಾಮಂತರ ಪರಸ್ಪರ ಒಳಜಗಳ ಮತ್ತು ಉತ್ತರಾಧಿಕಾರ ಸ್ಪರ್ಧೆಗಳ ಸಂದರ್ಭದಲ್ಲಿ ಸಕ್ರಿಯವಾಗಿ ಭಾಗವಹಿಸಿ ಆರ್ಥಿಕ ಮತ್ತು ರಾಜಕೀಯ ಲಾಭಗಳಿಗೆ ಸದಾ ಯತ್ನಿಸುತ್ತಿದ್ದ. ತನ್ನ ಮುತ್ಸದ್ದಿತನದಿಂದ ಫ್ರಾನ್ಸಿನ ರಾಜತ್ವದ ಹಿತಾಸಕ್ತಿಗಳನ್ನೂ ಕಾಪಾಡಿದ.

	ಚರ್ಚಿನ ನೇಮಕಗಳಲ್ಲಿ ತನ್ನ ನಿಯಂತ್ರಣ ಇಟ್ಟುಕೊಳ್ಳಲು ಯತ್ನಿಸಿ ಪೋಪನನ್ನು ಎದುರು ಹಾಕಿಕೊಂಡ. ರಾಜ ಮತ್ತು ಪೋಪರ ನಡುವಿನ ವಿರಸ ಫಿಲಿಪನು ನಾಲ್ಕನೆಯ ಫಲ್ಕನ ಪತ್ನಿ ಬೆಟ್ರಡಳನ್ನು ಅಪಹರಿಸಿದಾಗ ಪರಾಕಾಷ್ಠೆಗೆ ಮುಟ್ಟಿತು. 1104ರ ತನಕ ಪೋಪ್ ಪೀಠ ಈತನಿಗೆ ವಿರೋಧವಾಗಿತ್ತು. ಧರ್ಮಾಧಿಕಾರಿಗಳ ಕೆಲವೊಂದು ಷರತ್ತುಗಳಿಗೆ ಒಪ್ಪಿದಾಗ ಮತ್ತೆ ಚರ್ಚಿನೊಂದಿಗೆ ಸಂಬಂಧವುಂಟಾಯಿತು. ಫಿಲಿಪ್ ಷರತ್ತಿನಂತೆ ನಡೆಯಲಿಲ್ಲವಾದರೂ ಯಾರೂ ಅತ್ತಕಡೆ ಮತ್ತೆ ಗಮನಹರಿಸಲಿಲ್ಲ. ಕೊನೆಯ ದಿನಗಳಲ್ಲಿ ಫಿಲಿಪನಿಗೆ ವಿಪರೀತ ಬೊಜ್ಜು ಬೆಳೆದು ನಿಷ್ಕ್ರಿಯನಾದ. ಆಗ ಈತನ ಮಗ ಆರನೇ ಲೂಯಿ ಆಡಳಿತಗಳನ್ನು ನೋಡಿಕೊಳ್ಳಬೇಕಾಯಿತು.

	ಫಿಲಿಪ್ II: 1165-1223. ಫಿಲಿಪ್ ಅಗಸ್ಟನ್ ಎಂದೂ ಪರಿಚಿತನಾಗಿದ್ದ ಈತ ಫ್ರಾನ್ಸ್ ಸಾಮ್ರಾಜ್ಯವನ್ನು ವಿಸ್ತರಿಸಿದ್ದು ಮಾತ್ರವಲ್ಲದೆ ಅದನ್ನೊಂದು ಪ್ರಬಲ ರಾಷ್ಟ್ರವಾಗಿ ರೂಪಿಸಿದ ಕೀರ್ತಿವಂತ. ಏಳನೆಯ ಲೂಯಿ ಮತ್ತು ಅಡೆಲ ಅವರ ಮಗ. 1165 ಆಗಸ್ಟ್ 21ರಂದು ಪ್ಯಾರಿಸಿನಲ್ಲಿ ಜನಿಸಿದ. 1179 ನವಂಬರ್ 1ರಂದು ರೈಮ್ಸ್‍ನಲ್ಲಿ ಪಟ್ಟಾಭಿಷಿಕ್ತನಾಗಿ ತನ್ನ ತಂದೆಯೊಂದಿಗೆ ಸಹರಾಜನಾಗಿ ಆಳುತ್ತಿದ್ದ. ತಂದೆ ಕಾಯಿಲೆಯಿಂದ ನರಳುತ್ತಿದ್ದಾಗ ರಾಜ್ಯಭಾರದ ಸಂಪೂರ್ಣ ಜವಾಬ್ದಾರಿಯನ್ನೂ ಹೊತ್ತಿದ್ದ ಫಿಲಿಫ್ ತಂದೆಯ ನಿಧನಾನಂತರ (1180) ಸಿಂಹಾಸನವೇರಿದ.

	ಫಿಲಿಪ್ ಅಧಿಕಾರಕ್ಕೆ ಬಂದಾಗ ಫ್ರಾನ್ಸ್ ದುರ್ಬಲ ಸ್ಥಿತಿಯಲ್ಲಿತ್ತು. ಅಂಜೆವಿನ್ ಸಾಮ್ರಾಜ್ಯವೆಂದು ಕರೆಯಲಾದ ಫ್ರಾನ್ಸ್ ಭಾಗಗಳು ಮತ್ತು ಅದರ ಸುತ್ತಮುತ್ತಲಿನ ಅನೇಕ ಪ್ರದೇಶಗಳು ಇಂಗ್ಲೆಂಡಿನ ಎರಡನೆಯ ಹೆನ್ರಿಯ ಆಡಳಿತಕ್ಕೆ ಸೇರಿದ್ದುವು. ಪ್ರಾದೇಶಿಕ ವಿಸ್ತರಣೆಗಾಗಿ ಈತ 1187ರಿಂದ ಎರಡನೆಯ ಹೆನ್ರಿಯೊಡನೆ ಸತತ ಘರ್ಷಣೆಯಲ್ಲಿ ತೊಡಗಿದ. 1189ರ ಹೊತ್ತಿಗೆ ಹೆನ್ರಿಯಿಂದ ಇಸೌಡನ್ ಮತ್ತು ಗ್ರೇಸಿ ಮೊದಲಾದ ಪ್ರದೇಶಗಳನ್ನು ವಶಪಡಿಸಿಕೊಂಡ. ಹೆನ್ರಿಯ ನಿಧನಾನಂತರ (1189) ಅವನ ಮಗ ಒಂದನೆಯ ರಿಚರ್ಡ್‍ನೊಂದಿಗೆ 1191ರಲ್ಲಿ ಮೆಸ್ಸಿನ ಒಪ್ಪಂದ ಮಾಡಿಕೊಂಡ. ತರುವಾಯ ರಿಚರ್ಡನೊಂದಿಗೆ ಮೂರನೆಯ ಧರ್ಮಯುದ್ಧದಲ್ಲಿ ಭಾಗವಹಿಸಿದ. ಆದರೆ ಮತ್ತೆ ಮುಂದುವರಿದ ಇವರಿಬ್ಬರ ನಡುವಿನ ಕದನದಲ್ಲಿ 1199ರಲ್ಲಿ ರಿಚರ್ಡ್ ಸತ್ತ.

	ಫ್ರಾನ್ಸನ್ನು ಪ್ರಬಲ ರಾಷ್ಟ್ರವಾಗಿ ಮಾಡಲು ನಿರ್ಧಾರ ಮಾಡಿದ್ದ ಫಿಲಿಪ್ 1204ರಲ್ಲಿ ಮೈನ್, ಟಾರೈನ್, ಅಂಜೂ ಮೊದಲಾದ ಪ್ರದೇಶಗಳನ್ನು ವಶಪಡಿಸಿಕೊಂಡು ತನ್ನ ರಾಜ್ಯವನ್ನು ವಿಸ್ತರಿಸಿದ. 1213ರ ಹೊತ್ತಿಗೆ ಫ್ರಾನ್ಸಿನಲ್ಲಿದ್ದ ಆಂಗ್ಲೊ-ಆಂಜೆವಿನ್ ಶಕ್ತಿವ್ಯೂಹ ಕುಸಿದು ಫಿಲಿಪ್ ಯೂರೋಪಿನ ಅತ್ಯಂತ ಪ್ರಬಲ ರಾಜರಲ್ಲೊಬ್ಬ ಎನಿಸಿದ.

	ಫಿಲಿಪ್ ಅಗಸ್ಟನ್‍ನ ಆಡಳಿತ ಸುಧಾರಣೆಗಳು ಫ್ರಾನ್ಸ್ ರಾಜವಂಶದ ಅಧಿಕಾರ ಬಲಗೊಳ್ಳಲು ಕಾರಣವಾದುವು. ಅವನು ಫ್ರೆಂಚ್ ಶ್ರೀಮಂತರನ್ನು ನಿಯಂತ್ರಿಸಿ ಚರ್ಚಿನ ಅಧಿಕಾರಿಗಳೊಂದಿಗೆ ಸೌಹಾರ್ದ ಸಂಬಂಧವಿಟ್ಟುಕೊಂಡಿದ್ದ. ಮಧ್ಯಯುಗದಲ್ಲಿ ಫ್ರಾನ್ಸ್ ಪ್ರಬಲ ರಾಷ್ಟ್ರವಾಗಿ ಬೆಳೆಯಲು ದುಡಿದ ಫಿಲಿಪ್ ಮಾಂಟೆಸ್ ಎಂಬಲ್ಲಿ 1223ರಲ್ಲಿ ನಿಧನನಾದ.

	ಫಿಲಿಪ್ III : 1245-85. ಒಂಬತ್ತನೆಯ ಲೂಯಿಯ ಮಗ. ಹುಟ್ಟಿದ್ದು 1245 ಏಪ್ರಿಲ್ 3ರಂದು. ಈತ ತನ್ನ ಅಣ್ಣನ ನಿಧನಾನಂತರ 1270ರಿಂದ ಆಳ್ವಿಕೆ ಆರಂಭಿಸಿದ. ಆದರೆ ಈತನ ಪಟ್ಟಾಭಿಷೇಕ ನಡೆದದ್ದು 1271ರಲ್ಲಿ.

	ಫಿಲಿಪ್ ತನ್ನ ತಂದೆಯ ಉನ್ನತ ಆಡಳಿತ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಸಫಲನಾದ. ಸಮರ್ಥರಾದ ವ್ಯಕ್ತಿಗಳನ್ನು ಸರ್ಕಾರದ ಉನ್ನತ ಸ್ಥಾನಗಳಿಗೆ ನೇಮಿಸಿಕೊಂಡು ಆಡಳಿತದಲ್ಲಿ ದಕ್ಷತೆ ಹೆಚ್ಚಿಸಿದ. ಆದರೆ ತನ್ನ ಆಪ್ತರು ಮತ್ತು ಸಾಮಂತರ ಪ್ರಭಾವಕ್ಕೆ ಈತ ಒಳಗಾಗಿದ್ದ. ಅರಗಾನಿನ ರಾಜ ಒಂದನೇ ಜೇಮ್ಸ್‍ನ ಮಗಳು ಇಸಬೆಲ್ಲಳನ್ನು ಈತ 1262ರಲ್ಲಿ ವಿವಾಹವಾದ. ಅವಳು 1271ರಲ್ಲಿ ನಿಧನಳಾದಾಗ ಅವಳಿಗೆ ಸಲ್ಲಬೇಕಾಗಿದ್ದ ಟುಲೂಸ್ ಪ್ರದೇಶವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ.

	ಫಿಲಿಪ್ 1274ರಲ್ಲಿ ಬ್ರಬಾಂಟನ ಮೂರನೆಯ ಹೆನ್ರಿಯ ಮಗಳನ್ನು ಎರಡನೆಯ ಪತ್ನಿಯಾಗಿ ವರಿಸಿದ. ಅವಳು ಆಸ್ಥಾನದ ಒಳಜಗಳಗಳ ಕೇಂದ್ರವ್ಯಕ್ತಿ ಎನಿಸಿದಳು. ನವಾರೆಯ ಹಕ್ಕುದಾರಳಾಗಿದ್ದ ನವಾರೆಯ ರಾಜನ ಎಳೆಯ ಮಗಳನ್ನು ತನ್ನ ಮಗ ಫಿಲಿಪನಿಗೆ ತಂದುಕೊಂಡು ನವಾರೆಯ ರಾಜಪ್ರತಿನಿಧಿತ್ವವನ್ನೂ ಪಡೆದ. ಮುಂದೆ ಫ್ರಾನ್ಸ್ ಮತ್ತು ನವಾರೆ ಒಂದಾದವು. 1279ರಲ್ಲಿ ಏಜಿನಸ್ ಕೌಂಟಿಯನ್ನು ಇಂಗ್ಲೆಂಡಿನ ಒಂದನೇ ಎಡ್ವರ್ಡನಿಗೆ ಒಪ್ಪಿಸಿದ. ತನ್ನ ರಾಜ್ಯ ವಿಸ್ತರಣೆಗಾಗಿ ಈತ ಕೈಗೊಂಡ ಅನೇಕ ದಂಡಯಾತ್ರೆಗಳು ವಿಫಲವಾದವು. ಈತ ಸಿಸಿಲಿಯಿಂದ ಹಿಂದಿರುಗುತ್ತಿದ್ದಾಗ ಜ್ವರಪೀಡಿತನಾಗಿ ನಿಧನನಾದ.

	ಫಿಲಿಪನ ಎರಡನೆಯ ಪತ್ನಿಗೆ ಹುಟ್ಟಿದ ಮಗ ಫಿಲಿಪ್ ಮುಂದೆ ಫ್ರಾನ್ಸಿನ ನಾಲ್ಕನೆಯ ಫಿಲಿಪ್ ದಿ ಫೇರ್ ಎಂದು ಪ್ರಸಿದ್ಧನಾದ.

	ಫಿಲಿಪ್ Iv: 1268-1314. ಆ ಕಾಲದ ಸ್ಫುರದ್ರೂಪಿ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ ಈತ ದಿ ಫೇರ್ ಆಫ್ ಫ್ರಾನ್ಸ್ ಎಂದೂ ಹೆಸರಾಗಿದ್ದ. ಈತನ ತಂದೆ ಫಿಲಿಪ್ ದಿ ಬೋಲ್ಡ್. 1285ರಲ್ಲಿ ಅಧಿಕಾರಕ್ಕೆ ಬಂದ ಈತ ಹದಿನಾರನೆಯ ವಯಸ್ಸಿನಲ್ಲೆ ನವಾರೆಯ ರಾಜಕುಮಾರಿ ಜೊನಾಳನ್ನು ವಿವಾಹವಾದ. ಅದರಿಂದಾಗಿ ಈತನಿಗೆ ಕಾಂಪಗ್ನೆ, ಬ್ರಿಕ್ಸ್ ಮತ್ತು ನವಾರೆ ಪ್ರಾಂತ್ಯಗಳು ದೊರೆತವು. ಈತ ಧರ್ಮಾಧಿಕಾರ ವರ್ಗದ ಮೇಲೆ ತೆರಿಗೆ ವಿಧಿಸಲು ಪ್ರಯತ್ನಿಸಿದ. ಅದರಿಂದ ಪೋಪ್ 8ನೆಯ ಬೊನಿಫೆಸನಿಗೂ ಈತನಿಗೂ ಅಧಿಕಾರ ವ್ಯಾಪ್ತಿಯ ಬಗ್ಗೆ ಪರಸ್ಪರ ಘರ್ಷಣೆ ನಡೆಯಿತು. ಅದು 1303ರಲ್ಲಿ ಫಿಲಿಫ್ ಪೋಪನನ್ನು ಬಂಧಿಸಲು ಆಜ್ಞೆ ಹೊರಡಿಸುವ ಸ್ಥಿತಿ ತಲುಪಿತು. ಆದರೆ ಸ್ವಲ್ಪ ಕಾಲದಲ್ಲಿ ಪೋಪ್ ನಿಧನನಾದ. ಅನಂತರ ಬಂದ ಪೋಪರುಗಳು ಫಿಲಿಪನ ಪ್ರಭಾವಕ್ಕೆ ಒಳಗಾದರು. ಫಿಲಿಪನ ಪ್ರಭಾವದಿಂದ ಪೋಪ್ ಐದನೆಯ ಕ್ಲೆಮೆಂಟ್ ಪೋಪ್ ಆಸ್ಥಾನವನ್ನು ಅವಿಗ್ನಾನ್‍ಗೆ ವರ್ಗಾಯಿಸಿದ. ತನ್ನ ಧರ್ಮ ಶ್ರದ್ಧೆಯನ್ನು ಮೆರೆಯುವ ನೆಪದಲ್ಲಿ ಫಿಲಿಪ್ 1306 ರಲ್ಲಿ ಎಲ್ಲ ಜ್ಯೂಗಳನ್ನು ದೇಶದಿಂದ ಉಚ್ಚಾಟಿಸಿದ.

	ಫಿಲಿಪನ ವಿದೇಶಾಂಗ ನೀತಿ ದೂರದೃಷ್ಟಿಯಿಂದ ಕೂಡಿರಲಿಲ್ಲ. ಈತ ತನ್ನ ನೆರೆಯ ರಾಷ್ಟ್ರವಾದ ಇಂಗ್ಲೆಂಡಿನೊಡನೆ 1294ರಿಂದ ಒಂದು ದಶಕದ ಕಾಲ ಯುದ್ಧದಲ್ಲಿ ತೊಡಗಿದ. 1297ರಲ್ಲಿ ಕೆಲವೊಂದು ಗಮನಾರ್ಹ ಗೆಲುವುಗಳನ್ನು ಗಳಿಸಿದನಾದರೂ ಹೆಚ್ಚಿನ ಲಾಭವೇನೂ ಆಗಲಿಲ್ಲ. ಕೊನೆಗೆ 1303ರಲ್ಲಿ ಇಂಗ್ಲೆಂಡಿನೊಡನೆ ಸ್ನೇಹ ಒಪ್ಪಂದ ಮಾಡಿಕೊಂಡ. ತನ್ನ ಮಗಳನ್ನು ಒಂದನೆಯ ಎಡ್ವರ್ಡನ ಮಗನಿಗೆ ವಿವಾಹ ಮಾಡಿಕೊಟ್ಟ. ಈ ಒಪ್ಪಂದದ ಅನಂತರ ಶತ್ರು ಪಕ್ಷವಹಿಸಿದ್ದ ಈತನ ಸಾಮಂತ ಫ್ಲಾಂಡರ್ಸನ ಕೌಂಟ್‍ನನ್ನು ಹತ್ತಿಕ್ಕಲು ಸಾಧ್ಯವಾಯಿತು. ಫಾಂಟನ್‍ಬ್ಲೊನಲ್ಲಿ ಫಿಲಿಪ್ 1314ರಲ್ಲಿ ತೀರಿಕೊಂಡ.

	ಫಿಲಿಪ್ v: 1293-1322. ನಾಲ್ಕನೆಯ ಫಿಲಿಪನ ಎರಡನೆಯ ಮಗ. 1311ರಲ್ಲಿ ಪೊಯಿಟೈರ್ಸ್‍ನ ಕೌಂಟ್ ಆಗಿ ನೇಮಿತನಾದ. ಅವನ ಅಣ್ಣ 1316 ರಲ್ಲಿ ನಿಧನನಾದಾಗ ಫಿಲಿಪ್ ತನ್ನ ಅಣ್ಣನ ಮಗಳ ಉತ್ತರಾಧಿಕಾರದ ಹಕ್ಕನ್ನು ಮುರಿದು ಫ್ರಾನ್ಸ್ ಮತ್ತು ನವಾರೆಗಳ ಉತ್ತರಾಧಿಕಾರಿಯಾಗಿ 1317ರ ರೀಮ್ಸ್‍ನಲ್ಲಿ ಪಟ್ಟಾಭಿಷಿಕ್ತನಾದ.

	ಫಿಲಿಪ್ ರಾಜ್ಯಾಡಳಿತ ವ್ಯವಸ್ಧೆಯಲ್ಲಿ ಸುಧಾರಣೆಗಳನ್ನು ಮಾಡಿ ದಕ್ಷತೆ ಹೆಚ್ಚುವಂತೆ ಮಾಡಿದ. ಸ್ಧಳೀಯ ಅಧಿಕಾರಿಗಳು ಅಧಿಕಾರವನ್ನು ದುರುಪಯೋಗಿಸಿಕೊಳ್ಳದಂತೆ ಮಾಡಿದ. ರಾಜತ್ವದ ಘನತೆಯ ಮರುಸ್ಧಾಪನೆ ಮಾಡಿದ. ಅವನಿಗೆ ಫಿಲಿಪ್ ದಿ ಟಾಲ್ ಎಂಬ ಅಭಿದಾನವಿತ್ತು.

	ಫಿಲಿಪ್ ದಿ ಬೋಲ್ಡ್: 1342-1404. ಬರ್ಗಂಡಿಯ ಡ್ಯೂಕ್. ಫ್ರಾನ್ಸಿನ ಎರಡನೆಯ ಜಾನ್ ದೊರೆಯ ನಾಲ್ಕು ಮಕ್ಕಳಲ್ಲಿ ಕಿರಿಯವ. 1363ರಲ್ಲಿ ಇವನನ್ನು ಬರ್ಗಂಡಿಯ ಡ್ಯೂಕ್ ಆಗಿ ಜಾನ್ ನೇಮಿಸಿದರೂ 5ನೆಯ ಚಾಲ್ರ್ಸ್ ದೊರೆ ಆ ನೇಮಕವನ್ನು 1364ರಲ್ಲಿ ಊರ್ಜಿತಗೊಳಿಸಬೇಕಾಯಿತು. ಈತನ ಸಹೋದರ ಐದನೇ ಚಾಲ್ರ್ಸ್ 1363ರಲ್ಲಿ ಫ್ರಾನ್ಸಿನ ಸಿಂಹಾಸನವೇರಿದ. ಆ ಕಾಲದ ಸಮರ್ಥ ದಂಡನಾಯಕರಲ್ಲೊಬ್ಬನಾಗಿದ್ದ ಫಿಲಿಪ್ ಪೊಯಿಟರ್ಸ್ ಯುದ್ಧದಲ್ಲಿ ತೋರಿದ ಅಪ್ರತಿಮ ಸಾಹಸಕ್ಕಾಗಿ ಫಿಲಿಪ್ ದಿ ಬೊಲ್ಡ್ ಎಂದು ಹೆಸರಾದ. 1382ರಲ್ಲಿ ನಡೆದ ಫ್ಲೇಮಿಷ್ ದಂಗೆಯನ್ನೂ ಈತ ಎದುರಿಸಿದ.

	ಫ್ಲಾಂಡರ್ಸ್‍ನ ಕೌಂಟ್‍ಲೂಯಿಯ ಮಗಳು ವಿಧವೆ ಮಾರ್ಗರೇಟಳನ್ನು 1369ರಲ್ಲಿ ಮದುವೆಯಾದ. ಮಾರ್ಗರೇಟಳು ಇಂಗ್ಲಿಷ್ ದೊರೆಯನ್ನು ಮದುವೆಯಾಗುವುದನ್ನು ತಪ್ಪಿಸುವುದಕ್ಕಾಗಿ 5ನೆಯ ಚಾಲ್ರ್ಸ್‍ನೇ ಮುಂದಾಗಿ ನಿಂತು ಫಿಲಿಪ್ ಜೊತೆ ಮದುವೆ ಮಾಡಿಸಿದ. ಮಾವನ ನಿಧನಾನಂತರ ಅವನ ಶ್ರೀಮಂತ ಆಸ್ತಿಯೆಲ್ಲ ಈತನಿಗೆ ದಕ್ಕಿತು. ಈತನ ಆಡಳಿತ ದಕ್ಷತೆಯಿಂದ ಕೂಡಿದ್ದು ಆ ಕಾಲದ ಪ್ರಬಲ ಪ್ರಭುಗಳಲ್ಲಿ ಒಬ್ಬನೆಂದು ಖ್ಯಾತನಾದ.

	ತನ್ನ ಸೋದರನ ಮಗ ಆರನೇ ಚಾಲ್ರ್ಸ್ ಮನೋದೌರ್ಬಲ್ಯಕ್ಕೊಳಗಾದಾಗ ಈತ ಫ್ರಾನ್ಸ್‍ದೇಶದ ರಾಜಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸಿ ತನ್ನ ನೀತಿಯನ್ನೇ ಜಾರಿಗೊಳಿಸಿ ಫ್ರಾನ್ಸಿನ ಆಡಳಿತವನ್ನು ಸುಧಾರಿಸಿದ, ಫಿಲಿಪ್ ಬ್ರಬಾಂಟನ ಹಾಲೆ ಎಂಬಲ್ಲಿ 1404 ಏಪ್ರಿಲ್ 27ರಂದು ತೀರಿಕೊಂಡ,

	ಫಿಲಿಫ್ ದಿ ಗುಡ್: 1396-1467, ಬರ್ಗಂಡಿ ಡ್ಯೂಕರಲ್ಲಿ ಅತ್ಯಂತ ಪ್ರಸಿದ್ದನಾದವ. ಫಿಲಿಫ್ ದಿ ಬೋಲ್ಡನ ಮೊಮ್ಮಗ. ತನ್ನ ತಂದೆ ಕೊಲೆಗೀಡಾದಾಗ (1419) ಫಿಲಿಫ್ ಚೆಸ್ಸಿ ಒಡೆಯನಾದ. ತನ್ನ ತಂದೆಯ ಕೊಲೆಯ ಸೇಡು ತೀರಿಸಿಕೊಳ್ಳಲು 1420ರಲ್ಲಿ ಫ್ರಾನ್ಸಿನ ಡಾಫಿನ್ ಚಾಲ್ರ್ಸ್‍ನ ವಿರುದ್ಧ ಇಂಗ್ಲೆಂಡಿನ ಐದನೆಯ ಹೆನ್ರಿಯೊಂದಿಗೆ ಮೈತ್ರಿ ಬೆಳೆಸಿದ. ಇದರಿಂದಾಗಿ ಫ್ರಾನ್ಸ್, ಬರ್ಗಂಡಿ, ಡಾಫಿನ್ ಚಾಲ್ರ್ಸ್ (ತರುವಾಯ ಫ್ರಾನ್ಸ್‍ನ ಏಳನೆಯ ಚಾಲ್ರ್ಸ್) ಮತ್ತು ಇಂಗ್ಲೆಂಡ್‍ಗಳ ಪ್ರಭಾವ ವಲಯಗಳಲ್ಲಿ ಬಿರುಕುಂಟಾಯಿತು.

	ಫಿಲಿಪ್ ತನ್ನ ಆಳ್ವಿಕೆಯ ಪ್ರಾರಂಭದ ಒಂದೆರಡು ದಶಕಗಳ ಕಾಲ ಇಂಗ್ಲೆಂಡ್ ಮತ್ತು ಫ್ರಾನ್ಸ್‍ನ ಏಳನೆಯ ಚಾಲ್ರ್ಸ್‍ನೊಂದಿಗೆ ಸಮಯಸಾಧಕ ಮೈತ್ರಿ ಬೆಳೆಸಿದ. 1435-39ರ ಅವಧಿಯನ್ನು ಬಿಟ್ಟು ಉಳಿದ ಕಾಲ ಇಂಗ್ಲೆಂಡಿನೊಂದಿಗೆ ಸಖ್ಯದಿಂದಿದ್ದ, ಆದರೂ ಫ್ರಾನ್ಸ್ ವಿರುದ್ಧ ಇಂಗ್ಲೆಂಡಿಗೆ ಮನಃಪೂರ್ವಕ ಬೆಂಬಲ ನೀಡಲಿಲ್ಲ. ಡಾಫಿನ್ ಚಾಲ್ರ್ಸ್‍ನನ್ನು 1435ರಲ್ಲಿ ಫ್ರಾನ್ಸಿನ ರಾಜನೆಂದು ಮಾನ್ಯ ಮಾಡಿದ. ಅವನ ಮುತ್ಸದ್ದಿ ರಾಜಕಾರಣ ಅವನಿಗೆ ರಾಜ್ಯವನ್ನು ಬಲಪಡಿಸಿಕೊಳ್ಳಲು ಮತ್ತು ರಾಜ್ಯವನ್ನು ವಿಸ್ತರಿಸಲು ನೆರವಾಯಿತು. 1420ರಲ್ಲಿ ನಮೂರ್‍ಅನ್ನು ಕೊಂಡು ಕೊಂಡ. 1427ರಲ್ಲಿ ಹೈನಟ್ ಬರ್ಗಂಡಿಗೆ ಸೇರಿತು, 1424-33ರ ಅವಧಿಯಲ್ಲಿ ಫಿಲಿಪ್ ತೀವ್ರ ಸೆಣಸಾಟದಿಂದ ಹಾಲೆಂಡ್ ಮತ್ತು ಜೇಲೆಂಡ್‍ಗಳನ್ನು ಗೆದ್ದುಕೊಂಡ, 1443ರಲ್ಲಿ ಲಕ್ಷಂಬರ್ಗ್ ಡಚಿಯನ್ನು ವಶಪಡಿಸಿಕೊಂಡ.

	ಫಿಲಿಪನನ್ನು ಆಧುನಿಕ ಹಾಲೆಂಡ್ ಮತ್ತು ಬೆಲ್ಜಿಯಮ್‍ಗಳ ಅಸ್ತಿತ್ವಕ್ಕೆ ಮೂಲವಾದ ಬರ್ಗಂಡಿ ರಾಜ್ಯದ ನಿಜವಾದ ಸ್ಥಾಪಕನೆಂದು ಇತಿಹಾಸಕಾರರು ಪರಿಗಣಿಸಿದ್ದಾರೆ. ಇವನ ಕಾಲದಲ್ಲಿ ಅತ್ಯುನ್ನತ ಕಲಾಕೃತಿಗಳು ನಿರ್ಮಿತವಾದುವು. ಇವನು ವಿಲಾಸಿ ಜೀವನಕ್ಕೂ ಹೆಸರಾಗಿದ್ದ. ಸುಮಾರು 47 ವರ್ಷಗಳ ಕಾಲ ಆಳಿದ ಈತ 1467ರ ಜೂನ್ 15ರಂದು ತೀರಿಕೊಂಡ.

ಮ್ಯಾಸಿಡೋನಿಯದ ದೊರೆಗಳು

	ಫಿಲಿಪ್ II: ಕ್ರಿ. ಪೂ. 382-336 ಮೂರನೆಯ ಅಮಿಂಟಸನ ಮಗ. ಈತನ ಸಹೋದರ ಪರ್ಡಿಕಸ್ಸನ ಮರಣದ ಅನಂತರ 359ರಲ್ಲಿ ಪಟ್ಟಕ್ಕೆ ಬಂದ. ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದ ಆಂತರಿಕ ಶಾಂತಿವ್ಯವಸ್ಧೆ ಮಾಡುವತ್ತ ಗಮನಹರಿಸಿದ. 342ರಲ್ಲಿ ಪೊಸಿಯನ್ನರನ್ನು ಸೋಲಿಸಿದ ಮತ್ತು ಆಂಫಿನಿಕ್ ಕೌನ್ಸಿಲ್‍ನಲ್ಲಿ ಸ್ಧಾನ ಗೌರವ ಪಡೆದ. 359ರ ಹೊತ್ತಿಗೆ ಇವನು ಗ್ರೀಸ್ ಮೇಲೆ ಹತೋಟಿ ಪಡೆವಲ್ಲಿ ಯಶಸ್ವಿಯಾದ. ಮ್ಯಾಸಿಡೋನಿಯನ್ ತೀರದ ಗ್ರೀಕ್ ನಗರಗಳನ್ನು ವಶಪಡಿಸಿಕೊಂಡ. ಪರ್ಷಿಯಾದ ವಿರುದ್ಧ ಯುದ್ಧ ನಡೆಸಲು 337ರಲ್ಲಿ ಗ್ರೀಕ್ ರಾಜ್ಯಗಳನ್ನು ಒಂದುಗೂಡಿಸಿ ಕಾರಿಂತ್‍ನಲ್ಲಿ ಗ್ರೀಕ್ ಒಕ್ಕೂಟ ಸಭೆ ಸೇರಿಸಿದ. ಆದರೆ ಆ ನಿಟ್ಟಿನಲ್ಲಿ ಮುಂದುವರಿಯುತ್ತಿರುವಾಗಲೇ ಕೊಲೆಗೀಡಾದ (336). ಇವನ ಕಾಲದಲ್ಲಿ ಇಡೀ ಗ್ರೀಕ್ ರಾಜ್ಯ ಸಮೂಹದಲ್ಲಿ ಮ್ಯಾಸಿಡೋನಿಯ ಪ್ರಬಲವಾಯಿತು.

	ಫಿಲಿಪ್ ಮ್ಯಾಸಿಡೋನಿಯವನ್ನು ರೂಪಿಸಿದ. ಮ್ಯಾಸಿಡೋನಿಯದ ರಾಜರು ಪ್ರಪಂಚದ ಇತಿಹಾಸ ರೂಪಿಸಿದರು ಎಂಬ ಮಾತು ಇತಿಹಾಸಕಾರರಲ್ಲಿ ಪ್ರಚಲಿತವಿದೆ. ಇವನ ಮಗ 3ನೆಯ ಅಲೆಕ್ಸಾಂಡರ್ ತಂದೆ ಹಾಕಿದ ಭದ್ರ ಅಡಿಪಾಯದ ಮೇಲೆ ಸಾಮ್ರಾಜ್ಯ ನಿರ್ಮಿಸಿ ವಿಶ್ವವಿಖ್ಯಾತನಾದ.

	ಫಿಲಿಪ್ ಗಿ: ಕ್ರಿ.ಪೂ. ಸುಮಾರು 238-179. ಎರಡನೆಯ ಡೆಮೆಟ್ರಿಯಸನ ಮಗ. ಇವನ ಬಲಸಹೋದರ ಆಂಟಿಗೊನಸ್ 221ರಲ್ಲಿ ನಿಧನನಾದಾಗ ಫಿಲಿಪ್ ಸಿಂಹಾಸನವೇರಿದ. ಹೆಲಿನಿಕ್ ಲೀಗ್ ಸ್ಪಾರ್ಟ, ಏಟೋಲಿಯ ಮತ್ತು ಎಲೆಸ್‍ಗಳ ವಿರುದ್ಧ ನಡೆಸಿದ ಯುದ್ಧದಲ್ಲಿ ಇವನು ಲೀಗನ್ನು ಬೆಂಬಲಿಸಿದ. ಕ್ಯಾಥಜೀನಿಯನ್ ಸೇನಾನಿ ಹಾನಿಬಾಲ್ ಇಟಲಿಯ ಮೇಲೆ ದಾಳಿ ಮಾಡಿದಾಗ ಈತ 215ರಲ್ಲಿ ರೋಮ್‍ನೊಂದಿಗೆ ಅನುಕೂಲಕರ ಒಪ್ಪಂದ ಮಾಡಿಕೊಂಡು ಯುದ್ಧವನ್ನು ಅಂತ್ಯಗೊಳಿಸಿದ. ತರುವಾಯ ರೋಡೆಸ್ ದೇಶೀಯರ ಮತ್ತು ಈಜಿಪ್ಟಿಯನ್ನರ ವಿರುದ್ಧ ಯುದ್ಧಗಳಲ್ಲಿ ತೊಡಗಿದ. 201ರಲ್ಲಿ ರೋಡೆಸ್ಸರಿಗೆ ಸೋತ. ಈ ಸೋಲಿನ ಅನಂತರ ಫಿಲಿಪ್‍ನ ಉತ್ಕರ್ಷ ಇಳಿಮುಖವಾಯಿತು. ಮ್ಯಾಸಿಡೋನಿಯ (199) ಮತ್ತು ಥೆಸಲೀಗಳ (198) ಮೇಲೆ ರೋಮನ್ನರು ನಡೆಸಿದ ದಾಳಿಗಳಿಂದ ಫಿಲಿಪನ ಪ್ರಾಬಲ್ಯ ಕುಂದಿತು. 197ರಲ್ಲಿ ರೋಮನ್ನರು ಫಿಲಿಪನನ್ನು ಥೆಸಲೀಯ ಸಿನಾಸೆ ಫಾಲೀ ಎಂಬಲ್ಲಿ ನಿರ್ಣಾಯಕವಾಗಿ ಸೋಲಿಸಿ ಕೆಲವು ಪ್ರದೇಶಗಳನ್ನು ಪಡೆದದ್ದಲ್ಲದೆ ಯುದ್ಧ ನಷ್ಟವನ್ನು ತುಂಬಿಸಿಯೂ ಕೊಂಡರು. ಜೊತೆಗೆ ಇವನ ಕಿರಿಯ ಮಗ ಡೆಮಟ್ರಿಯಸ್‍ನನ್ನು ಒತ್ತೆಯಾಳಾಗಿ ಕರೆದೊಯ್ದರು. ಈ ಸಂದಿಗ್ಧ ವೇಳೆಯಲ್ಲಿ ಮುತ್ಸದ್ದಿಯಾಗಿದ್ದ ಫಿಲಿಪ್ ರೋಮನರೊಂದಿಗೆ ಸಂಬಂಧಗಳನ್ನು ಹಿತವಾಗಿಸಿಕೊಂಡು ಅವರ ಬೆಂಬಲಕ್ಕೆ ನಿಂತ.

	ಫಿಲಿಪ್ ಮೇಧಾವಿ ರಾಜನಾಗಿದ್ದ. ಈತ ತನ್ನ ರಾಜ್ಯವನ್ನು ಬಲಪಡಿಸುವ ಕಾರ್ಯದಲ್ಲಿ ಸದಾ ಮಗ್ನನಾಗಿದ್ದ. ಇವನು ಗಣಿಗಳನ್ನು ಪುನರಾರಂಭಿಸಿದ. ಕೇಂದ್ರ ಮತ್ತು ಸ್ಥಳೀಯ ನಾಣ್ಯಗಳನ್ನು ಹೊರಡಿಸಿದ. 184-181ರ ಅವಧಿಯಲ್ಲಿ ಬಾಲ್ಕನ್ ಪ್ರದೇಶಗಳ ಮೇಲೆ ತನ್ನ ಪರಮಾಧಿಕಾರ ಸ್ಥಾಪಿಸಿದ. ಉತ್ತಮ ಯೋಧ ಮತ್ತು ಸಾಹಸಿ ಮ್ಯಾಸಿಡೋನಿಯದ ಕೀರ್ತಿಯನ್ನು ಹೆಚ್ಚಿಸಿದವರಲ್ಲಿ ಇವನು ಮುಖ್ಯನೆಂದು ಭಾವಿಸಲಾಗಿದೆ.

ಸ್ಪೇನಿನ ದೊರೆಗಳು

	ಫಿಲಿಪ್ I, ದಿ ಹ್ಯಾಂಡ್‍ಸವಲ್: 1478-1506. ಸ್ಪೇನ್ ದೇಶವನ್ನು ಸುಮಾರು ಎರಡು ಶತಮಾನ ಆಳಿದ ಹಾಪ್ಸ್‍ಬರ್ಗ್ ರಾಜವಂಶದ ಸ್ಥಾಪಕ. ಸ್ಪೇನಿನ ಕಾಸ್ಟೀಲ ರಾಜ್ಯದ ದೊರೆ. ಈತ ಒಂದನೆಯ ಮ್ಯಾಕ್ಸಿಮಿಲಿಯನನ ಪುತ್ರ. ಈತನ ತಾಯಿ ಬರ್ಗಂಡಿಯ ಮೇರಿ, ಚಾಲ್ರ್ಸ್ ದಿ ಬೋಲ್ಡ್‍ನ ಮಗಳು. ಈಕೆಯ ಮರಣಾನಂತರ ಬರ್ಗಂಡಿ ಪ್ರದೇಶಗಳು 1482ರಲ್ಲಿ ಈತನಿಗೆ ಲಭಿಸಿದವು. 1496ರಲ್ಲಿ ಎರಡನೆಯ ಫರ್ಡಿನೆಂಡನ ಮಗಳು ಜೋನ್ ಎಂಬವಳನ್ನು ವಿವಾಹವಾದ. ತನ್ನ ಮಾವನ ವಿರುದ್ದವೇ ಈತ ತನ್ನ ಪತ್ನಿಯ ಹಕ್ಕುಗಳಿಗಾಗಿ ಹೋರಾಡಬೇಕಾಗಿ ಬಂತು. ಕೊನೆಗೆ ಅಧಿಕಾರ ಸ್ಥಾಪಿಸಿ ಅದರ ನಿರ್ವಹಣಾ ಕಾರ್ಯದಲ್ಲಿದ್ದಾಗಲೇ ಫಿಲಿಪ್ 1506 ಸೆಪ್ಟೆಂಬರ್ 25ರಂದು ಬರ್ಗೆಸಿನಲ್ಲಿ ಹಠಾತ್ತಾಗಿ ನಿಧನವಾದ.

	ಫಿಲಿಪ್ II: 1527-98. ಒಂದನೆಯ ಫಿಲಿಪ್ ಎಂಬ ಹೆಸರಿನಿಂದ ಪೋರ್ಚುಗಲ್ಲನ್ನೂ ಆಳಿದ ಈ ಸ್ಪೇನ್ ದೊರೆ ಪವಿತ್ರ ರೋಮನ್ ಚಕ್ರವರ್ತಿ ಐದನೆಯ ಚಾಲ್ರ್ಸ್ ಮತ್ತು ಪೋರ್ಚುಗಲ್ಲಿನ ಇಸಬೆಲ್ಲರ ಮಗ. ಬಾಲ್ಯದಲ್ಲಿಯೇ ರಾಜ್ಯಭಾರ ನಿರ್ವಹಣೆಯ ತರಬೇತಿ ಪಡೆದ. ಇವನಿಗೆ 1540ರಲ್ಲಿ ಮಿಲಾನ್, 1544ರಲ್ಲಿ ನೇಪಲ್ಸ್ ಮತ್ತು ಸಿಸಿಲಿಗಳ ಒಡೆತನ ದೊರೆಯಿತು. ಮರುವರ್ಷ ನೆದರ್ಲೆಂಡ್ಸನ್ನು ಚಾಲ್ರ್ಸ್ ಫಿಲಿಪ್‍ನಿಗೆ ವಹಿಸಿದ. 1556ರಲ್ಲಿ ಸ್ಪೇನ್ ಮತ್ತು ಸ್ಪ್ಯಾನೀಷ್ ಸಾಮ್ರಾಜ್ಯದ ಚಕ್ರವರ್ತಿಯಾದ.

	ಈತ ನೆದರ್ಲೆಂಡ್ಸಿನಲ್ಲಿ ಫ್ರೆಂಚರ ವಿರುದ್ಧ ಯುದ್ಧ ಕೈಗೊಂಡು 1559ರಲ್ಲಿ ಐಬೇರಿಯನ್ ಪರ್ಯಾಯ ದ್ವೀಪಕ್ಕೆ ಹಿಂದಿರುಗಿದ. ಇವನು ದೈವಭಕ್ತನೂ, ಧರ್ಮಾಂಧನೂ ಆಗಿದ್ದ. ಇವನ ಕ್ಯಾಥೋಲಿಕ್ ಧರ್ಮರಕ್ಷಣಾ ಧೋರಣೆಯಿಂದಾಗಿ ಗ್ರನಡದಲ್ಲಿ 1560-70ರಲ್ಲಿಯೂ ಇವನ ಅನಂತರ ನೆದರ್ಲೆಂಡ್ಸ್‍ನಲ್ಲಿ 1568-1609ರಲ್ಲಿಯೂ ದಂಗೆಗಳು ಎದ್ದುವು. ಇದೇ ಧೋರಣೆ ಆಟೋಮನ್ ಸಾಮ್ರಾಜ್ಯದೊಂದಿಗೆ ಯದ್ಧದಲ್ಲಿ ತೊಡಗುವಂತೆ ಮಾಡಿತು. 1571ರಲ್ಲಿ ಲಿಂಪಾಂಟೊ ಯುದ್ಧದಲ್ಲಿ ಆಟೋಮನ್ನರ ಆಕ್ರಮಣವನ್ನು ಎದುರಿಸಿ ಭಾರಿ ನೌಕಾಯುದ್ಧ ನಡೆಸಿದ. ಈ ಹೋರಾಟ 1578ರ ತನಕವೂ ಮುಂದುವರಿದಿತ್ತು. ಇವನ ಪ್ರಾಟೆಸ್ಟೆಂಟ್ ವಿರೋಧಿಧೋರಣೆ ಇಂಗ್ಲೆಂಡಿನೊಂದಿಗಿನ ಸಂಬಂಧಗಳನ್ನು ಕೆಡಿಸಿತು. ಕ್ಯಾಥೋಲಿಕ್ ಧರ್ಮದ ಸ್ಥಿರತೆಗಾಗಿ ಮತ್ತು ನೆದರ್ಲೆಂಡ್ಸಿನಲ್ಲಿ ಸುಭದ್ರತೆ ಸ್ಥಾಪಿಸುವುದಕ್ಕಾಗಿ ಇವನು 1558ರಲ್ಲಿ ಇಂಗ್ಲೆಂಡ್ ಮೇಲೆ ನೌಕಾ ದಾಳಿಮಾಡಿದ. ಆದರೆ ಇವನಿಂದ ಇಂಗ್ಲೆಂಡ್ ಮತ್ತು ಉತ್ತರ ನೆದರ್ಲೆಂಡ್ಸನ್ನು ಸೋಲಿಸಲಾಗಲಿಲ್ಲ. ಇಂಗ್ಲೆಂಡಿನೊಡನೆ ಸ್ಪೇನಿನ ಸಂಘರ್ಷ ಇವನ ಮರಣಾನಂತರವೂ ಮುಂದುವರಿಯಿತು.

	ಎರಡನೆಯ ಫಿಲಿಪನ ರಾಜಕೀಯ ಕ್ರಮಗಳು ಐಬೇರಿಯನ್ ಪರ್ಯಾಯ ದ್ವೀಪದ ಏಕತೆ ಸಾಧಿಸಲು ನೆರವಾದವು. ಸ್ಪೇನ್ ಮತ್ತು ಇಟಲಿಗಳಲ್ಲಿ ಪ್ರಾಟೆಸ್ಟೆಂಟ್ ಧರ್ಮ ಹರಡದಂತೆ ತಡೆದ ಈತ ಫ್ರಾನ್ಸಿನ ನಾಲ್ಕನೆಯ ಹೆನ್ರಿ ಕ್ಯಾಥೊಲಿಕ್ ಪಂಥವನ್ನು ಒಪ್ಪಿಕೊಳ್ಳಲೂ ಸ್ವಲ್ಪಮಟ್ಟಿಗೆ ಕಾರಣನಾದ. ಇವನ ಕಾಲದಲ್ಲಿ ಸ್ಪ್ಯಾನಿಷ್ ಸಾಮ್ರಾಜ್ಯ ಶಕ್ತಿಯುತವೂ ಭೌಗೋಳಿಕವಾಗಿ ವಿಸ್ತಾರವೂ ಆಗಿತ್ತು. ಈತ ತನ್ನ ರಾಜ್ಯದಲ್ಲಿಯ ವಾಸ್ತವ ಸಮಸ್ಯೆಗಳನ್ನು ಖುದ್ದಾಗಿ ಅರಿಯಲು, ಬಗೆಹರಿಸಲು ಪ್ರಯತ್ನಿಸದೆ ಅರಮನೆಯಲ್ಲಿದ್ದುಕೊಂಡೇ ತೀರ್ಪು ಮತ್ತು ಆಜ್ಞೆ ಹೊರಡಿಸುತ್ತಿದ್ದನೆಂಬ ಟೀಕೆ ಇದೆ. ಈತ ತೀರ ಅಪ್ತರಲ್ಲೂ ಬೇಗ ಸಂದೇಹ ತಾಳುತ್ತಿದ್ದ. ಇವನ ಕೋಪಕ್ಕೆ ಹಲವಾರು ಸಾಮಂತರು ತುತ್ತಾಗಿದ್ದರು. ಇದು ಇವನ ಆಸ್ಥಾನದಲ್ಲಿ ಭಯಭೀತ ವಾತಾವರಣಕ್ಕೆ ಕಾರಣವಾಗಿತ್ತು.

	ಫಿಲಿಪನ ಕಾಲದಲ್ಲಿ ಸ್ಪ್ಯಾನಿಷ ಸಾಹಿತ್ಯದ ಸುವರ್ಣಯುಗ ಆರಂಭವಾಯಿತು. ಈತ ಧರ್ಮಾಂಧನೆಂಬ ಅಪವಾದಕ್ಕೊಳಗಾಗಿದ್ದರೂ ಐರೋಪ್ಯ ರಾಜಕೀಯದಲ್ಲಿ ಸ್ಪೇನಿನ ಪ್ರಭಾವವನ್ನು ಉತ್ತುಂಗಕ್ಕೇರಿಸಿದ ಮತ್ತು ಐಬೇರಿಯನ್ ಪರ್ಯಾಯ ದ್ವೀಪದ ರಾಜಕೀಯ ಮತ್ತು ಸಾಂಸ್ಕøತಿಕ ಭವ್ಯತೆಗೆ ಬುನಾದಿ ಹಾಕಿದ ವ್ಯಕ್ತಿ ಎಂಬ ಹೊಗಳಿಕೆಗೆ ಪಾತ್ರನಾಗಿದ್ದಾನೆ.

	ಫಿಲಿಪ್ Iಗಿ: 1605-65. ಮೂರನೆಯ ಫಿಲಿಪ್ ಮತ್ತು ಮಾರ್ಗರೇಟ್‍ರ ಹಿರಿಯ ಮಗ. ಈತ 1605 ಏಪ್ರಿಲ್ 8ರಂದು ವಲಡ ಲಿಡ್‍ನಲ್ಲಿ ಜನಿಸಿದ. 1621ರಲ್ಲಿ ತಂದೆಯ ನಿಧನಾನಂತರ ಸಿಂಹಾಸನವೇರಿದ. ಅಧಿಕಾರವಹಿಸಿಕೊಂಡ ಅನಂತರ ಗ್ಯಾಸಪರೆ ಆಲಿವರ್ಸ್ ಎಂಬ ತನ್ನ ನಂಬಿಗಸ್ಥನನ್ನು ಮುಖ್ಯಮಂತ್ರಿಯಾಗಿ ಮಾಡಿದ. ಫಿಲಿಪ್ ತನ್ನ ಆಳ್ವಿಕೆಯ ಆರಂಭಕಾಲದಿಂದಲೂ ಯೂರೋಪಿನಲ್ಲಿ ಸ್ಪೇನ್‍ನ ಪಾರಮ್ಯವನ್ನು ಸ್ಥಾಪಿಸಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದ. ಅದಕ್ಕಾಗಿ ದೇಶವನ್ನು ನಿರಂತರ ಯುದ್ಧದಲ್ಲಿ ತೊಡಗಿಸಿದ. ಆದರೆ ಯೂರೋಪಿನಲ್ಲೇ ಬಲು ವಿಸ್ತಾರ ಪ್ರದೇಶ ಪಡೆದಿದ್ದ ರಾಷ್ಟ್ರದ ಆಡಳಿತ ನಿರ್ವಹಣೆ ಅದಕ್ಷತೆಯಿಂದ ಕೂಡಿತ್ತು. ಈತ ಆಲಿವರ್ಸನಿಗೆ ಕಾರ್ಯ ಭಾರವಹಿಸಿ ತಾನು ಸುಖ ಜೀವನಲೋಲನಾದ. ಇದರಿಂದ ಜನತೆ ಜುಗುಪ್ಸೆಗೊಂಡಿತು. ಕೆಲವು ಕಾರಣಗಳಿಗಾಗಿ 1643ರಲ್ಲಿ ಆಲಿವರ್ಸ್‍ನನ್ನು ಮಂತ್ರಿಪದವಿಯಿಂದ ವಜಾ ಮಾಡಿದ.

	ರಾಷ್ಟ್ರದ ಆಡಳಿತನ್ನು ಪುನಸ್ಸಂಘಟಿಸಲು ಸ್ವಲ್ಪಕಾಲ ಪ್ರಯತ್ನಿಸಿದ ಫಿಲಿಪ್ ಮತ್ತೆ ವಿಲಾಸಜೀವನದಲ್ಲಿ ಮುಳುಗಿದ. ಆಲಿವರ್ಸ ಸ್ಥಾನಕ್ಕೆ ಡಾನ್ ಲೂಯಿ ಮೆಂಡೆಜ್ ಡಿ ಹ್ಯಾರೋನನ್ನು ನೇಮಿಸಿದ. ಈತ ತನ್ನ ಮರಣದವರೆಗೂ ಆಸ್ಥಾನದಲ್ಲಿದ್ದ (1661). ಫಿಲಿಪ್‍ನ ರಾಜಕೀಯ ನಿಲುವು ಆತನ ಹಿರಿಯರಿಂದ ಪಡೆದದ್ದು. ರಾಜಕೀಯದಲ್ಲಿ ಪ್ರಾಟೆಸ್ಟೆಂಟ್ ವಿರೋಧಿ ನೀತಿಯನ್ನು ಅನುಸರಿಸಿದ. ನೆದರ್ಲೆಂಡ್ಸ್, ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳ ವಿರುದ್ಧ ನಡೆಸಿದ ದೀರ್ಘ ಹೋರಾಟದಿಂದ ರಾಜ್ಯದ ಬೊಕ್ಕಸ ಬರಿದಾಯಿತು; ಜನತೆ ಕಷ್ಟನಷ್ಟ ಅನುಭವಿಸಬೇಕಾಯಿತು.

	ಫಿಲಿಪ್ ಎರಡು ಬಾರಿ ವಿವಾಹ ಮಾಡಿಕೊಂಡ. ಮೊದಲ ಪತ್ನಿ ಎಲಿಜಬೆತ್ (ಸ್ಪಾನೀಷ್, ಇಸಬೆಲ) ಅವಳು ಫ್ರಾನ್ಸಿನ ರಾಜ ನಾಲ್ಕನೆಯ ಹೆನ್ರಿಯ ಮಗಳು. 1644ರಲ್ಲಿ ಆಕೆ ನಿಧನಳಾದಾಗ ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿ ಮೂರನೆಯ ಫರ್ಡಿನೆಂಡನ ಮಗಳು ಮೇರಿಯಾ ಅನ್ನಾಳನ್ನು ವಿವಾಹವಾದ. ಈತ ಕಲಾಪೋಷಕನೂ ಸ್ವತಃ ಕವಿಯೂ ಆಗಿದ್ದನೆಂದು ತಿಳಿದುಬರುತ್ತದೆ.

	ಫಿಲಿಪ್ v: 1683-1746. ಬಾರ್ಬನ್ ರಾಜವಂಶದ ಸ್ಥಾಪಕ. ಫ್ರಾನ್ಸಿನ ಡೂಫಾನ್ ಲೂಯಿ ಮತ್ತು ಮೇರಿಯ ಅನ್ನಾರಿಗೆ 1683 ಡಿಸಂಬರ್ 19ರಂದು ವರ್ಸೈಲ್ಸಿನಲ್ಲಿ ಹುಟ್ಟಿದ. ಅಂಜುವಿನ ಡ್ಯೂಕ್ ಆಗಿದ್ದ. ಇವನು ಸ್ಪೇನಿನ ರಾಜನಾಗಿದ್ದ. ಎರಡನೆ ಚಾಲ್ರ್ಸನ ಇಚ್ಛೆಯಂತೆ 1700ರಲ್ಲಿ ಸಿಂಹಾಸನವೇರಿದ. ಸ್ಪಾನಿಷ್ ಅಮೆರಿಕ, ಸ್ಪಾನಿಷ್ ನೆದರ್ಲೆಂಡ್ಸ್ ಮತ್ತು ಇಟಲಿಯ ಭಾಗಗಳೂ ಈತನ ಆಡಳಿತಕ್ಕೆ ಒಳಪಟ್ಟವು.

	ಫಿಲಿಪನ ಮೊದಲ ಹದಿಮೂರು ವರ್ಷಗಳ ಆಡಳಿತ ಫ್ರಾನ್ಸ್ ಪ್ರಭಾವಕ್ಕೆ ಒಳಗಾಗಿತ್ತು. ಅದಕ್ಕೆ ಈತನ ಮೊದಲ ಪತ್ನಿ ಸವಾಯಿನ ಮೇರಿ ಲೂಯಿಸ್ ಕಾರಣ. 1713ರ ಯೂಟ್ರೆಕ್ಟ್ ಒಪ್ಪಂದದಿಂದ ಸ್ಪಾನಿಸ್ ನೆದರ್ಲೆಂಡ್ಸ್ ಮತ್ತು ಇಟಲಿಯ ಪ್ರದೇಶಗಳು ಫಿಲಿಪನ ಕೈಬಿಟ್ಟು ಹೋದವು. 1714ರಲ್ಲಿ ಮೇರಿ ನಿಧನಳಾದಳು. ಅನಂತರ ಈತ ಫಾರ್ಮಾದ ಎಲಿಜಬೆತ್‍ಫರ್ನೀಸಳನ್ನು (ಇಸಬೆಲ್ಲ) ಅದೇ ವರ್ಷ ವಿವಾಹವಾದ. ಈಕೆಯ ಪ್ರಚೋದನೆಯಿಂದಲೇ ಫಿಲಿಪ್ ಇಟಲಿಯ ಹ್ಯಾಬ್ಸಬರ್ಗ್ ಪ್ರದೇಶಗಳನ್ನು ಭದ್ರಪಡಿಸುವ ಪ್ರಯತ್ನದಲ್ಲಿ ಆಸ್ಟ್ರಿಯಾ, ಗ್ರೇಟ್ ಬ್ರಿಟನ್, ಫ್ರಾನ್ಸ್ ಮತ್ತು ಸಂಯುಕ್ತ ಪ್ರಾಂತಗಳೊಂದಿಗೆ ಯುದ್ಧದಲ್ಲಿ ತೊಡಗಿದ. ಕೊನೆಗೆ ಫಾರ್ಮಾದ ಡಚ್ಚಿಗೆ ಈತನ ಎರಡನೆಯ ಹೆಂಡತಿಯ ಹಿರಿಯಮಗ ಡಾನ್‍ಕಾರ್ಲೆಸ್ ಉತ್ತರಾಧಿಕಾರಿಯಾದ.

	ಫಿಲಿಪ್ ತನ್ನ ಮಕ್ಕಳಿಗೆ ಫ್ರಾನ್ಸಿನ ಸಿಂಹಾಸನ ದೊರಕಿಸಲು ಸತತವಾಗಿ ಪ್ರಯತ್ನಿಸಿದ. ಅದಕ್ಕಾಗಿ ಹಲವು ಸಂಚುಗಳಲ್ಲೂ ಪಾಲ್ಗೊಂಡ. 1724ರಲ್ಲಿ ತನ್ನ ಮಗ ಲೂಯಿಗಾಗಿ ಸಿಂಹಾಸನ ತ್ಯಜಿಸಿದ. ಆದರೆ ಕೆಲವು ತಿಂಗಳುಗಳ ಅನಂತರ ಲೂಯಿ ನಿಧನನಾದಾಗ ಮತ್ತೆ ಸಿಂಹಾಸನವೇರಬೇಕಾಗಿ ಬಂತು.

	ಫಿಲಿಪ್ ಮಹತ್ತ್ವಾಕಾಂಕ್ಷೆಯ ರಾಜ. ಆತನ ಆಡಳಿತ ಕಾಲದಲ್ಲಿ ಕೆಲವು ಮಹತ್ತ್ವದ ಆಡಳಿತ ಮತ್ತು ಆರ್ಥಿಕ ಸುಧಾರಣೆಗಳನ್ನು ತರಲಾಯಿತು. ಆದರೆ ವಸ್ತುಸ್ಥಿತಿ ಮತ್ತು ದೂರದೃಷ್ಟಿಯ ಅಭಾವದಿಂದ ಆತನ ಅನೇಕ ಯೋಜನೆಗಳು ಕುಂಠಿತಗೊಂಡವು. ಕೊನೆಗಾಲದಲ್ಲಿ ಫಿಲಿಪ್ ಆಡಳಿತ ನಡೆಸಲಾರದಂಥ ಸ್ಥಿತಿ ತಲುಪಿದ್ದ. ಆಗ ಆತನ ಪತ್ನಿ ಹೆಚ್ಚಾಗಿ ಆಡಳಿತದ ಹೊಣೆ ಹೊತ್ತಿದ್ದಳು. ಫಿಲಿಪ್ ಮ್ಯಾಡ್ರಿಡಿನಲ್ಲಿ ನಿಧನನಾದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ